ಚೀನೀ ಸಂಗೀತ

	ಚೀನೀಯರು ತಮ್ಮ ಸಂಗೀತವನ್ನು ಪೂರ್ಣ ಜಗತ್ತಿನ ಪ್ರತಿಬಿಂಬವೆಂದು ಪರಿಗಣಿಸಿ ಅದಕ್ಕೆ ಪವಿತ್ರವಾದ ಸ್ಥಾನವನ್ನು ಕೊಟ್ಟಿದ್ದರು. ಮನುಷ್ಯನ ಇಂದ್ರಿಯಗಳ ತೃಪ್ತಿ ಮಾತ್ರಕ್ಕಾಗಿಯೇ ಸಂಗೀತವನ್ನು ಬಳಸುವ ಪದ್ಧತಿಗಿಂತ ಸತ್ಯತತ್ತ್ವವನ್ನು ಪ್ರತಿಪಾದಿಸುವ ಸುಂದರಮಾರ್ಗವಾಗಿಯೂ ಸಾಧನವಾಗಿಯೂ ಅದನ್ನು ಬಳಸುವ ಪದ್ಧತಿ ರೂಢಿಯಲ್ಲಿತ್ತು.

	3000 ವರ್ಷಗಳಿಗೂ ಹಿಂದಿನವಾದ, ಸನಾತನ ಧರ್ಮಜನ್ಯವಾದ ಪುರಾಣ ಮತ್ತು ಐತಿಹ್ಯಗಳ ಕಾಲವನ್ನೇ ಚೀನೀ ಸಂಗೀತ ಚರಿತ್ರೆಯ ಉಗಮ ಕಾಲವೆನ್ನುವುದು ಸಂಪ್ರದಾಯ. ಆ ಕಾಲದಲ್ಲಿ ಆಳಿದ ಪ್ರತಿಯೊಬ್ಬ ಚಕ್ರವರ್ತಿಯೂ ತನ್ನದೇ ಆದ ಒಂದು ಸಂಗೀತ ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಿದ್ದ. ಆ ಚಕ್ರವರ್ತಿಯ ಹೆಸರೂ ಅವನ ಸಂಗೀತ ಪದ್ಧತಿಯ ನಾಮವನ್ನೇ ಸೂಚಿಸುತ್ತಿತ್ತು. ಫೂ (ಫೂ ಲಾಯ್ ಎಂದು ಕರೆವುದಿದೆ) ಎಂಬ ಶಬ್ದ ಪೂ ಷೀ ಎಂಬ ರಾಜನ ಹೆಸರನ್ನು ಅವನ ಕಾಲದ ಸಂಗೀತ ಪದ್ಧತಿಯ ಹೆಸರನ್ನೂ ಸೂಚಿಸುತ್ತದೆ. ಈತ ಐವರು ಪವಿತ್ರ ದೊರೆಗಳಲ್ಲಿ ಒಬ್ಬನೆನಿಸಿ ಕ್ರಿ.ಪೂ. 2852ರಲ್ಲಿ ಆಡಳಿತವನ್ನು ಸ್ಥಾಪಿಸಿ ಸಂಗೀತವನ್ನು ಬೆಳೆಸಿದವ.

	ಚೀನೀಯರ ತತ್ತ್ವಶಾಸ್ತ್ರ ಮತ್ತು ಅಧ್ಯಾತ್ಮ ಶಾಸ್ತ್ರಗಳನ್ನೊಳಗೊಂಡ ಸಂಗೀತ ಶಾಸ್ತ್ರಕ್ಕೆ ಫೂ ಷೀ ಹಾಕಿದ ತಳಹದಿಯೇ ಹಲವಾರು ಶತಮಾನದವರೆಗೂ ರೂಢಿಯಲ್ಲಿತ್ತು. ಚೀನೀಯರ ಪ್ರಧಾನ ವಾದ್ಯಗಳಾಗಿದ್ದ ಚಿನ್ ಮತ್ತು ಸೆ ವಾದ್ಯಗಳೂ ಗೋಳಾಕೃತಿಯ ಕೊಳಲನ್ನು ಹೋಲುವ ಷ್ಯಾನ್ ಮತ್ತು ಷೆಂಜ್ ಎಂಬ ಸುಷಿರವಾದ್ಯಗಳೂ ಈತನಿಂದಲೇ ರೂಪಿಸಲ್ಪಟ್ಟವೆಂದು ತಿಳಿದುಬರುತ್ತದೆ. ಚೀನದ ಪವಿತ್ರ ದೊರೆಗಳಲ್ಲಿ ಮೂರನೆಯವನಾದ ಷೆನ್‍ಯಾಂಗನ ಕಾಲದಲ್ಲಿ ಫ್ಯೂಟೊ ಅಥವಾ ಷ್ಯಾ ಮೌ ಎಂಬ ಸಂಗೀತ ಪದ್ಧತಿಯೂ ಮತ್ತೊಬ್ಬ ಪವಿತ್ರ ದೊರೆಯಾದ ಹ್ವಾಂಗ್ ಡೀ ಎಂಬುವನ ಕಾಲದಲ್ಲಿ ಷಿಯೆನ್ ಚಿ ಎಂಬ ಸಂಗೀತ ಪದ್ಧತಿಯೂ ರೂಢಿಯಲ್ಲಿತ್ತು. ಈ ಕಾಲದಲ್ಲಿಯೇ ಚೀನೀ ಸಂಗೀತಕ್ಕೆ ಆಧಾರ ಸ್ಥಾಯಿಯಾದ ಹ್ವಾಂಗ್ ಚಿಂಗ್ ಎಂಬ ಮತ್ತು ಲೂ ಎಂಬ ಹನ್ನೆರಡು ಸ್ವರಸ್ಥಾನಗಳ ಕ್ರಮಗಳು ಬಳಕೆಗೆ ಬಂದುವು. ಈ ಪದ್ಧತಿಯ 20ನೆಯ ಶತಮಾನದವರೆಗೂ ಬಳಕೆಯಲ್ಲಿತ್ತು. ಇತರ ಪವಿತ್ರ ರಾಜರಾಜರಾದ ಷಾ-ಹೌ ಮತ್ತು ಚ್ವಾನ್ ಷ್ಯೂ ಎಂಬುವರ ಕಾಲದಲ್ಲಿ ಚೀನದಲ್ಲಿನ ಸಂಗೀತದ ಸ್ಥಾನ-ಮಾನಗಳ ವಿವರಗಳು ಅಷ್ಟಾಗಿ ತಿಳಿದಿಲ್ಲ. ಅನಂತರದ ವರ್ಷಗಳಲ್ಲಿ ರಾಜ್ಯಭಾರ ನಡೆಸುತ್ತಿದ್ದ ಯು ಎಂಬ ರಾಜನ ಕಾಲದ್ಲಲಿ ಟಾ-ಚ್ಯಾಂಗ್ ಎಂಬ ಸಂಗೀತ ಪದ್ಧತಿ ರೂಢಿಯಲ್ಲಿತ್ತು. ಷನ್ ರಾಜನ ಕಾಲದಲ್ಲಿ ಮನಶ್ಯಾಸ್ತ್ರ, ತತ್ತ್ವಶಾಸ್ತ್ರ ಮುಂತಾದ ಶಾಸ್ತ್ರಗಳಿಗಿರುವಂತೆಯೇ ಸಂಗೀತದ ಬಗ್ಗೆಯೂ ಒಂದು ಶಾಸ್ತ್ರೀಯ ಅಧ್ಯಯನಕ್ಕೆ ಅವಕಾಶ ಒದಗಿತು. ಸಂಗೀತದ ಪ್ರಭಾವ, ಪಾತ್ರವನ್ನು ಕುರಿತು ಜನ ವಿವೇಚನೆ ಮಾಡಲಾರಂಭಿಸಿದರು. ಈತ ಸಂಗೀತ ವಾದ್ಯಗಳನ್ನು ಫೂ ಷೀ ಎಂಬುವರ ಕಾಲದ ಭೌತವಿಜ್ಞಾನದ ಆಧಾರದ ಮೇಲೆ 8 ವರ್ಗಗಳನ್ನಾಗಿ ವಿಂಗಡಿಸಿದ. ಪ್ಯಾನ್ ಪೈಪ್ ಎಂಬ ಸುಷಿರವಾದ್ಯ, 5 ತಂತಿಗಳಿದ್ದ ಚ್ಯೂ ಎಂಬ ಸಿತಾರ್ ವಾದ್ಯ ಷನ್ ರಾಜನ ಕಾಲದಲ್ಲಿ ನಿರ್ಮಾಣಗೊಂಡವು. ಈತನ ಕಾಲದ ಸಂಗೀತವನ್ನು ಟಾ-ಷಾವೋ ಎಂದು ಕರೆಯಾಲಾಗುತ್ತಿತ್ತು. ಈತನೇ ಮೊಟ್ಟ ಮೊದಲಿಗೆ ಸಾಂಪ್ರದಾಯಿಕ ಸಂಗೀತದಲ್ಲಿ ನೃತ್ಯವನ್ನು ಸೇರಿಸಿದವನೆಂದು ತಿಳಿದುಬರುತ್ತದೆ. ಅನಂತರ ರಾಜ್ಯವಾಳಿದ ಟಾಹಿಯ ಎಂಬ ರಾಜ ಟಾಹಿಯ ಎಂಬ ಹೆಸರಿನ ಸಂಗೀತವನ್ನೇ ಬಳಕೆಗೆ ತಂದ.

	ಷಾಂಗ್ ಮನೆತನದ ಆಳ್ವಿಕೆಯಲ್ಲಿ ಅವನದೇ ಆದ ಕು ಎಂಬ ವಾದ್ಯ ಮತ್ತು ಚೆಂಗ್ ಎಂಬ ಘಂಟೆ ಬಳಕೆಗೆ ಬಂದಿತೆಂದೂ ಮತಾನುಸಂಬಂಧವಾದ ಸಂಗೀತದಲ್ಲಿ ನೃತ್ಯವಿದ್ದು ಹಿಮ್ಮೇಳನದಲ್ಲಿ ವಾದ್ಯ ಮೇಳವೂ ಇರುತ್ತಿತ್ತೆಂದು ತಿಳಿದುಬರುತ್ತದೆ. ಈ ಕಾಲಕ್ಕೆ ಸಂಬಂಧಿಸಿದಂಥ ಭೂಸಂಶೋಧನೆಯ ವರದಿಯ ಪ್ರಕಾರ ಅತಿ ಪ್ರಾಚೀನ ವಾದ್ಯವಾದ ಷ್ಯುಯೆನ್ ಎಂಬ ಸುಷಿರವಾದ್ಯವೂ ಮಧುರಸ್ವರವನ್ನು ಕೊಡುವ ನಾದಸ್ತಂಭಗಳೂ ಇದ್ದುವೆನ್ನಲಾಗಿದೆ. ಧರ್ಮನಿಷ್ಠ ತತ್ತ್ವಜ್ಞಾನಿ ಲಾವೋ ಟ್ಸೆಯೂ ಕಾನಫ್ಯೂಷಸನ ಅನುಯಾಯಿಯಾಗಿದ್ದ ಕಾಂಗ್-ಟ್ಸೀ ಎಂಬುವನೂ ಚೀನದ ಸಂಗೀತ ಚರಿತ್ರೆಯಲ್ಲಿ ಪ್ರಮುಖ ವ್ಯಕ್ತಿಗಳು; ಲೌಕಿಕ ಮತಸಂಬಂಧವಾದ ಸಂಗೀತದಲ್ಲಿ ಲಕ್ಷ್ಯದ ಪ್ರಾಧಾನ್ಯವನ್ನು ಎತ್ತಿ ಸಾರಿದವರಿವರು. ಚೀನದ ಶ್ರೇಷ್ಠ ಸಾಹಿತ್ಯವನ್ನು ಪರಿಷ್ಕರಿಸಿ ಸಂಗೀತದ ಚಾರಿತ್ರಿಕ ಹಿನ್ನೆಲೆಗೆ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಲು ಅನುಕೂಲ ವಾತಾವರಣ ಇವರ ಕಾಲದಲ್ಲಿ ಒದಗಿತು. ಈಜಿಂಗ್ ಎಂಬ ಚೀನೀ ಕೃತಿಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ತತ್ತ್ವಗಳು ಪ್ರತಿಪಾದಿತವಾಗಿವೆ. ಸ್ಲೂ ಜಿಂಗ್ ಎಂಬ ಕೃತಿಯಲ್ಲಿ ಪದ್ಯಗಳ ಜೊತೆಗೆ ಭಾವಗೀತಗಳೂ ಸಂಗೀತಕ್ಕೆ ಸಂಬಂಧಿಸಿದಂಥ ಹಲವಾರು ಅಂಶಗಳೂ ಉಲ್ಲೇಖಗೊಂಡಿವೆ. ಚರಿತ್ರೆಗೆ ಸಂಬಂಧಿಸಿದಂಥ ಷೂ ಜಿಂಗ್ ಎಂಬ ಕೃತಿಯಲ್ಲಿ ಯೋಕೀ ಎಂಬ ಅಧ್ಯಾಯವಿದೆ. ಸಂಗೀತದ ತತ್ತ್ವಜ್ಞಾನ, ಲಕ್ಷಣ ಮತ್ತು ಮಂತ್ರ ಕ್ರಿಯಾವಿಧಿಗಳಲ್ಲಿ ಸಂಗೀತದ ಪ್ರಾಮುಖ್ಯವನ್ನು ಕುರಿತಂತೆ ಈ ಅಧ್ಯಾಯದಲ್ಲಿ ವಿವರಣೆಗಳಿವೆ. ಚೀನೀ ಲಕ್ಷಣಕಾರನಾದ-ಲೂಫ್ಯೂ-ವೀ ಎಂಬುವ ಷೀ-ಚಿನ್-ಟ್ಸಿಯ ಎಂಬ ಚೀನೀಸಂಗೀತದ ಪ್ರಥಮ ಲಕ್ಷಣಗ್ರಂಥಗಳನ್ನು ಬರೆದಿದ್ದಾನೆ. ಈ ಕಾಲಕ್ಕೆ ಚೀನಿರಾಜಾಸ್ಥಾನಗಳಲ್ಲಿ ವೈವಿಧ್ಯಮಯ ವಾದ್ಯಮೇಳಗಳನ್ನು ಕೂಡಿಸುವುದು. ಬಳಕೆಗೆ ಬಂತು. ಸಂಗೀತ, ಸಾಹಿತ್ಯ, ನೃತ್ಯಗಳು. ಋತುಹಬ್ಬಗಳಲ್ಲಿಯೂ ಬೇಸಾಯದ ಸಂದರ್ಭಗಳಲ್ಲೂ ಹಾಡುವ ಹಾಡುಗಳು-ಇವೇ ಮುಂತಾದವುಗಳನ್ನು ಮದುವೆ ಸಂದರ್ಭಗಳಲ್ಲೂ ಬಳಸುವುದು ರೂಢಿಗೆ ಬಂತು.

	ಪ್ರಾಚೀನ ಚೀನೀಸಂಗೀತದ ಇತಿಹಾಸ ಚೌ ಮನೆತನದವರೆಗೂ ಬೆಳೆದು ಬಂದಿದ್ದು, ಚಿನ್ ಮನೆತನದ ಷೀ ಹ್ವಾಂಗ್ ಟೀ ಎಂಬ ರಾಜ ಅಂದು ಉಪಲಬ್ಧವಿದ್ದ ಗ್ರಂಥಗಳನ್ನೂ ಸಂಗೀತ ವಾದ್ಯಗಳನ್ನೂ ನಾಶ ಮಾಡಲು ಆಜ್ಞಾಪಿಸಿದನೆಂದು ತಿಳಿದುಬರುತ್ತದೆ. ಆದಕಾರಣ ಆತನ ಕಾಲವನ್ನು ಚಿನ್ ಕಾಲವೆಂದೇ (ಗ್ರಂಥ ನಿರ್ಮೂಲನ ಕಾಲ) ಅನ್ವರ್ಥವಾಗಿ ಸಂಬೋಧಿಸಲಾಯಿತು. ಅನಂತರ ಹಾನ್ ಎಂಬ ರಾಜ ಹಲವಾರು ಗ್ರಂಥಗಳನ್ನು ಪ್ರಚುರಪಡಿಸಿದನಲ್ಲದೆ ಭೂಸಂಶೋಧನೆಯನ್ನು ನಡೆಸಿ ಗತಕಾಲದ ಹಲವಾರು ವಾದ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಒದಗಿಸಿದ. ಈ ಸಂಶೋಧನೆಯಲ್ಲಿ ದೊರೆತ ಸ್ಟೋನ್ ಚೈಮ್ ಎಂಬ ವಾದ್ಯದ ಆಧಾರದ ಮೇಲೆ ಮತ್ತಷ್ಟು ವೈವಿದ್ಯಪೂರ್ಣವಾದ ಹೊಸ ಮಾದರಿಯ ಚೈಮ್ ಎಂಬ ವಾದ್ಯವನ್ನು ಸೃಜಿಸಲಾಯಿತು. ಟ್ಸಿಯಾನ್-ಯೆನ್-ಷೀಯಾನ್ ಎಂಬ ತಜ್ಞನೊಬ್ಬ 64 ಸ್ವರಪದ್ಧತಿಯ ಕ್ರಮವನ್ನು ವಿವರಿಸಿದ. ಸಾಂಪ್ರಾದಾಯಿಕ ಸಂಗೀತ, ಜಾನಪದ ಸಂಗೀತದ ಮೇಲ್ವಿಚಾರಣೆಗಳಿಗೆ ಸಂಬಂಧಿಸಿದಂತೆ ಇರುವ ಸ್ಥಿರ ಆಧಾರಸ್ಥಾಯಿ ಮುಂತಾದವುಗಳನ್ನು ಸದರಪಡಿಸಲು ವೂ ಎಂಬ ರಾಜಯೂ-ಫ್ಯೂ ಎಂಬ ಸಾಮ್ರಾಜ್ಯ ಸಂಗೀತ ಸಂಸ್ಥೆಯನ್ನು ಸ್ಥಾಪಿಸಿದ. ವಿದ್ವಾಂಸನಾದ ಫ್ಯಾಂಗ್ ಎಂಬ ರಾಜ 53 ಮತ್ತು 60 ಸ್ವರಕ್ರಮಗಳನ್ನು ವ್ಯಾಖ್ಯಾನಿಸಿದ ಪಶ್ಚಿಮ ತುರ್ಕಿಸ್ಥಾನದಿಂದ ಹಲವಾರು ಹೊಸ ಹೊಸ ವಾದ್ಯಗಳು ಚೀನಕ್ಕೆ ಬಂದು ಅವುಗಳ ಬಳಕೆ ಹೆಚ್ಚಾಯಿತು. ಇದೇ ಕಾಲದಲ್ಲಿ ಬೌದ್ಧಮತ ಭಾರತದಿಂದ ಚೀನಕ್ಕೂ ವ್ಯಾಪಿಸಿತು. ಬೌದ್ಧ ಭಿಕ್ಷುಗಳು ತಮ್ಮ ಮಂತ್ರೋಚ್ಛಾರಣೆಯ ಸಂಗೀತದ ಜೊತೆಗೆ ಚೀನದ ವಾದ್ಯವಾದ ಚಿನ್ ಎಂಬ ತಂತೀವಾದ್ಯವನ್ನು ಉಪಯೋಗಿಸಿ ಭಾರತದಲ್ಲಿ ಬಳಕೆಯಲ್ಲಿರುವ ಗಮಕ ತಂತ್ರಗಳನ್ನೂ ನುಡಿಸಲು ಪ್ರಯತ್ನಪಟ್ಟು ಯಶಸ್ವಿಯಾದರು.

	ಕಚ್ ರಾಜ್ಯದ ಅವನತಿಯ ಅನಂತರ ಚೀನ ಪರ್ಶಿಯ ದೇಶದಲ್ಲಿ ಬಳಕೆಯಲ್ಲಿದ್ದ ಕ್ಯಾಂಕ್ ಎಂಬ ತಂತಿವಾದ್ಯವನ್ನು ಕಂಗ್-ಹ್ಯು ಎಂಬ ಹೆಸರಿನಲ್ಲಿ ಬಳಸಿಕೊಂಡು ಪ್ರಧಾನ ವಾದ್ಯವನ್ನಾಗಿ ಮಾರ್ಪಡಿಸಿಕೊಂಡಿತು. ಇದೇ ಮಾದರಿಯ ಹಲವಾರು ಅವನದ್ಧ ವಾದ್ಯಗಳೂ ಘನವಾದ್ಯಗಳೂ ಪರದೇಶದಿಂದ ಬಂದು ಸೇರಿಕೊಂಡವು. ಹಾಟ್‍ಚಂಗ್ ಟಿಯೆನ್ ಎಂಬ ಖಗೋಳಶಾಸ್ತ್ರಜ್ಞ ಸಮಾನಾಂತರ ಶ್ರೇಣಿಯ ಬಗ್ಗೆ ಒಂದು ಪ್ರಬಂಧವನ್ನು ಬರೆದ. ಸಾಂಗ್ ವೆನ್ಲಿ ಎಂಬ ರಾಜನ ಆಸ್ಥಾನದಲ್ಲಿದ್ದ ಟ್ಸಿಯೆನ್-ಯೋ-ಚೀ ಎಂಬ ತಜ್ಞ 360 ಸ್ವರಗಳನ್ನು ಕುರಿತು ವಿಮರ್ಶೆ ಮಾಡಿರುವುದು ತಿಳಿದಿದೆ. ಯಂಗ್-ಮಿಮಗ್ ಎಂಬ ಚಕ್ರವರ್ತಿಯ ಕಾಲದಲ್ಲಿ ನೃತ್ಯ ಕಾನ್‍ಫ್ಯೂಷಸನ ಆಚಾರವಿಧಿಗಳಲ್ಲಿ ಪ್ರಮುಖ ಭಾಗವನ್ನು ಅಳವಡಿಸಿಕೊಂಡಿತು. ಕ್ರಿ.ಪೂ. 568ರಲ್ಲಿ ತುರ್ಕಿಯ ರಾಜಕುಮಾರಿಯೊಬ್ಬಳು ಚೀನದ ರಾಜಕುಮಾರ ವ್ಯೂ-ಟೀ ಎಂಬುವನನ್ನು ಮದುವೆಯಾಗಿ ಕುಚ ದೇಶಕ್ಕೆ ಸೇರಿದ ಹಲವಾರು ಸಂಗೀತಜ್ಞರನ್ನು ಮತ್ತು ಷಯು-ಚಿಪೋ ಎಂಬ ವಿದ್ವಾಂಸನನ್ನು ತನ್ನೊಡನೆ ಕರೆ ತಂದಳು. ಪರ್ಶಿಯದ ಹೆಸರುಗಳನ್ನೇ ಹೊಂದಿದ ಏಳು ರಾಗಗಳ ಪರಿಚಯ ಚೀನದಲ್ಲೂ ಆಯಿತು. ಕೋಲಿ, ಭಾರತ, ಬುಕಾರ ಮತ್ತು ಕುಚ ದೇಶಗಳ ವಾದ್ಯಮೇಳಗಳನ್ನನುಸರಿಸಿ ಏಳು ವಿಧವಾದ ವಾದ್ಯಮೇಳಗಳನ್ನು ಚೀನದಲ್ಲಿ ಪ್ರಚಾರಕ್ಕೆ ತರಲಾಯಿತು. ಕುಚ ವಾದ್ಯಮೇಳ 20 ವಾದಕ ಗಾಯಕರನ್ನು ಒಳಗೊಂಡಿತ್ತೆಂದು ತಿಳಿದುಬರುತ್ತದೆ. ಚೀನದ ಸಂಗೀತ 5ನೆಯ ಶತಮಾನದಲ್ಲಿ ಕೊರಿಯಕ್ಕೂ 6ನೆಯ ಶತಮಾನದಲ್ಲಿ ಜಪಾನಿಗೂ ವ್ಯಾಪಿಸಿತು.

	ಸುಯಿ ಮನೆತನದವರ ಆಳ್ವಿಕೆಯಲ್ಲಿ ವಾದ್ಯಮೇಳಗಳೂ ಸಂಗೀತಗಾರರೂ ಬುಕಾರ, ಸಮರ್‍ಖಂಡ್, ಕಾಷ್‍ಗರ್ ಮತ್ತು ಕುಚ ದೇಶಗಳಿಂದ ಚೀನಕ್ಕೆ ಆಗಮಿಸಿದರು. ಟಾಂಗ್ ಮನೆತನದವರ ಆಳ್ವಿಕೆಯಲ್ಲಿ ವಾದ್ಯಮೇಳಗಳು ಪುನರುತ್ಥಾನಗೊಂಡು ಮತ್ತುಷ್ಟು ಶೋಭಿಸಿದುವು. ನಿರ್ದೇಶಕನ ಸ್ಥಾನಕ್ಕೆಂದೇ ವಾದ್ಯ ಮೇಳಗಳಲ್ಲಿ ಪ್ರತ್ಯೇಕ ಸ್ಥಳಗಳು ಏರ್ಪಟ್ಟವು. ಮಿಮಗ್ ಹ್ವಾಂಗ್ ಚಕ್ರವರ್ತಿಯ ಕಾಲದಲ್ಲಿ 6 ಮಂದಿ ನಿಂತೂ 8 ಮಂದಿ ಕುಳಿತೂ ನುಡಿಸತಕ್ಕ ವಾದ್ಯಮೇಳಗಳೂ ಬಳಕೆಯಲ್ಲಿತ್ತೆಂಬುದಾಗಿ ತಿಳಿದುಬರುತ್ತದೆ. ಈ ಮೇಳಗಳಲ್ಲಿ ಸುಮಾರು 500ರಿಂದ 700ರ ವರೆಗೆ ಕಲಾವಿದರು ಪಾಲ್ಗೊಳ್ಳುತ್ತಿದ್ದರೆನ್ನಲಾಗಿದೆ. ಲೀ-ಯೂಯೆನ್ ಎಂಬ ಸಾಮ್ರಾಜ್ಯ ಸಂಗೀತ ವಿದ್ವತ್ ಸಭೆ ರಾಜಾಸ್ತಾನಕ್ಕೆ ಶೋಭಿಸುವಂಥ ಸಂಗೀತ ಮತ್ತು ನೃತ್ಯ ಪ್ರವೀಣರನ್ನು ಒದಗಿಸುತ್ತಿತ್ತು.

	ಸೂಂಗ್ ಮತ್ತು ಟಾಂಗ್ ರಾಜರ ಆಳ್ವಿಕೆಯಲ್ಲಿ ಚೀನದ ಶಾಸ್ತ್ರೀಯ ಸಂಗೀತದ ಪರ್ವಕಾಲವೆನ್ನಬಹುದು. ಲಕ್ಷ್ಯ ಲಕ್ಷಣಗಳೆರಡೂ ಒಂದಕ್ಕೊಂದು ಪೂರಕವಾಗಿ ಅತ್ಯುತ್ತಮವಾದ ಸ್ಥಾನಮಾನಗಳನ್ನು ಪಡೆದಿದ್ದವು. ಟ್ಸೈ-ಯೂಯೆನ್-ಟಿಂಗ್ ಎಂಬ ತಜ್ಞ ಲಕ್ಷಣ ರೀತ್ಯ 18 ಸ್ವರಗಳನ್ನೂ ನೂತನ 9 ಸ್ವರಗಳನ್ನೊಳಗೊಂಡ ಒಂದು ಸ್ವರಶ್ರೇಣಿಯ ಬಗ್ಗೆಯೂ ಸಂಶೋಧನೆ ನಡೆಸಿದ. ರಾಜರ ಆಸ್ಥಾನಕ್ಕೆ ಸೇರಿಕೊಂಡಂತೆ ಅತ್ಯುನ್ನತ ನಾಟಕಗೃಹವೂ ನಿರ್ಮಾಣವಾಯಿತು. ಹೀಗಾಗಿ ಸಂಗೀತದಲ್ಲಿ ಇದ್ದ ಮಡಿವಂತಿಕೆ ಸ್ವಲ್ಪ ಸಡಿಲವಾಗಿ ಲಘು ಸಂಗೀತವೂ ಬಳಕೆಗೆ ಬರಲಾರಂಭಿಸಿತು.

	ಯೂಯಾನ್ ಅಥವಾ ಮುಂಗೋಲಿಯನ್ನರ ಆಳ್ವಿಕೆಯ ಕಾಲದಲ್ಲಿ ಚೀನದ ಸಂಗೀತಕ್ಕೆ ಹೆಚ್ಚಿನ ಮಹತ್ತ್ವ ಬಂತು. ರಾಜರು ಸ್ಥಳೀಯ ಸಂಗೀತವನ್ನೂ ಕಲಾವಿದರನ್ನೂ ಪ್ರೋತ್ಸಾಹಿಸುವುದರ ಜೊತೆಗೆ ಹಲವಾರು ವೈವಿದ್ಯಮಯ ವಾದ್ಯಗಳನ್ನೂ ತಮ್ಮದೇ ಆದ ನೂತನ ಸ್ವರಶ್ರೇಣಿಗಳನ್ನೂ ಜನತೆಗೆ ಪರಿಚಯ ಮಾಡಿಸಿದರು. ಅವೇಶಪೂರಿತ ಭಾಷಣ, ವೈವಿಧ್ಯಮಯ ಸಂಗೀತ, ಮೂಕನಾಟಕ ಪ್ರದರ್ಶನ ಮುಂತಾದ ಭಾಗಗಳನ್ನೊಳಗೊಂಡು ನಾಟಕ ನವಚೈತನ್ಯವನ್ನು ತಾಳಿತು. ಇದನ್ನು ಮತ್ತಷ್ಟು ಪ್ರೋತ್ಸಾಹಿಸಿ ನಾಟಕದ ಮಹತ್ತ್ವವನ್ನು ರಾಜರು ಹೆಚ್ಚಿಸಿದರು. ಸಂಗೀತದಿಂದಾಗಿ ನಾಟಕಕ್ಕೆ ಹೊಸ ಮೆರಗು ಬಂತು.

	ಟ್ಸೈ-ಯು ಎಂಬ ರಾಜ ವೈಜ್ಞಾನಿಕ ದೃಷ್ಟಿಯಿಂದ ಸಮಾನಾಂತರ ಸ್ವರ ಶ್ರೇಣಿಯ ಸೂತ್ರವನ್ನು ಸ್ಪಷ್ಟಪಡಿಸಿದ. ಚೀನೀ ಸಂಗೀತವನ್ನು ಪ್ರತಿಪಾದಿಸುವ ಹಲವಾರು ಅಮೂಲ್ಯ ಬೃಹತ್ ಗ್ರಂಥಗಳನ್ನು ಪ್ರಚುರಪಡಿಸಿದ. ಇದೇ ಕಾಲದಲ್ಲಿ ರೋಮನರ ದೇವಾಲಯದ ಸಂಗೀತ (ಚರ್ಚ್ ಮ್ಯೂಸಿಕ್) ಚೀನದಲ್ಲೂ ಆಚರಣೆಗೆ ಬಂತು. ಪಾದ್ರಿಗಳಲ್ಲದೆ ಧರ್ಮಪ್ರಚಾರಕ ಸಂಸ್ಥೆಗಳೂ ಸಂಗೀತ ಗ್ರಂಥಗಳನ್ನು ಪ್ರಚುರಪಡಿಸದವು. ಚಿಂಗ್ ರಾಜರ ಆಳ್ವಿಕೆಯಲ್ಲಿ ಪಾಶ್ಚಾತ್ಯ ಸಂಗೀತದ ಪ್ರಭಾವ ಸಾಕಷ್ಟಿತ್ತು. ಪೆರೇರ ಮತ್ತು ಪೇಡ್ರಿನಿ ಎಂಗ ತಜ್ಞರು ಸಂಸ್ಥಾನದ ಸಂಗೀತ ಪ್ರಾಧ್ಯಾಪಕರಾಗಿ ನೇಮಕವಾದರು. ಪೇಡ್ರಿನಿ ಎಂಬುವ ಹಲವಾರು ವಾದ್ಯಗಳನ್ನೂ ಪೆರಿ ಏಮಿಯಟ್ ಎಂಬ ಲಾಕ್ಷಣಿಕ ಪ್ರಖ್ಯಾತ ಚೀನೀ ಸಂಗೀತದ ಲಕ್ಷಣ ಗ್ರಂಥವನ್ನೂ ಬರೆದರು. 19ನೆಯ ಶತಮಾನದಲ್ಲಿ ಷೆಂಗ್ ಮುಂತಾದ ವಾದ್ಯಗಳು ಬಳಕೆಗೆ ಬಂದುವು. ಕಾಲಕ್ರಮೇಣ ಶಾಸ್ತ್ರೀಯ ನಾಟಕ ಮತ್ತು ಸಂಗೀತದಲ್ಲಿ ಸ್ವಲ್ಪ ಇಳಿಮುಖ ಕಂಡುಬಂತು. ಕಲಾವಿದರು ಅವುಗಳಲ್ಲಿ ಇಟ್ಟಿದ್ದ ಪವಿತ್ರ ಭಾವನೆಯನ್ನು ಒತ್ತಿಟ್ಟಿಗಿಡಲು ಪ್ರಾರಂಭಿಸಲಾಗಿ ತಮ್ಮ ಶ್ರೇಷ್ಠ ಸ್ಥಾನಮಾನಗಳನ್ನು ಕಳೆದುಕೊಳ್ಳಬೇಕಾಯಿತು. 1912ರಲ್ಲಿ ಚಕ್ರವರ್ತಿಯ ಆಳ್ವಿಕೆ ಕೊನೆಗೊಂಡು ಪ್ರಜಾಪ್ರಭುತ್ವ ಸ್ಥಾಪಿತವಾಯಿತು.

	20ನೆಯ ಶತಮಾನದಲ್ಲಿ ಸ್ಥಳಜನ್ಯ ಚೀನೀ ಸಂಗೀತದೊಂದಿಗೆ ಪಾಶ್ಚಾತ್ಯ ಸಂಗೀತವೂ ಕೂಡಲಾರಂಭಿಸಿತು. ಆಧುನಿಕ ಶಿಕ್ಷಣ ಕ್ರಮ, ವಾದ್ಮಯ ಮೇಳಗಳ ರಚನೆ ಮುಂತಾದವುಗಳಲ್ಲಿ ಐರೋಪ್ಯ ಸಂಗೀತದ ಅನುಕರಣೆಯಾಗಿದೆ. ಚೀನದ ಪ್ರಾಚೀನ ಸಂಸ್ಥಾನ ಸಂಗೀತ ಪದ್ಧತಿಯ ಕುರುಹು ಈಗ ಸ್ವಲ್ಪಮಟ್ಟಿಗೆ ಜಪಾನೀ ಸಂಗೀತದಲ್ಲಿ ಉಳಿದಿರುವುದನ್ನು ಕಾಣಬಹುದು. ಸ್ಥಳಜನ್ಯಸಂಗೀತ ಚೀನದಲ್ಲಿ ಅಲ್ಪಾವಶೇಷನಾಗಿ ಉಳಿದಿದ್ದರೂ ಅದರ ಪ್ರಭಾವ ಪೂರ್ವದೇಶಗಳಲ್ಲಿ ಇಂದಿಗೂ ಕಾಣಸಿಗುತ್ತದೆ. ಹ್ವಾಂಗ್ ಚಂಗ್ ಎಂಬ ಘಂಟೆಯಲ್ಲಿ ಹೊರಡುವ ನಾದವೇ ಪ್ರಾರಂಭ ಸ್ವರವಾಗಿ ಮೊದಲಿಗೆ ಕುಂಗ್ ಎಂದು ಸಂಬೋಧಿಸಲ್ಪಡುತ್ತಿದೆ. ಪ್ರಧಾನ ಪೂರ್ವ ಕೃತಿ ಸಿದ್ಧವಾದ ವಾದ್ಯಗಳಲ್ಲಿ ಹ್ವಾಂಗ್ ಚಿಂಗ್ ಸ್ವರ ಪಾಶ್ಚಾತ್ಯ ಪದ್ಧತಿಯ ಆ ಯನ್ನು (ಕರ್ನಾಟಕ ಸಂಗೀತದ ರಿ ಸ್ವರ) ಹೋಲುತ್ತದೆ ಎಂದು ಕೆಲವರೂ ಈ ನ್ನು (ಕರ್ನಾಟಕ ಸಂಗೀದ ಮ ಸ್ವರ) ಹೋಲುತ್ತದೆ ಎಂದು ಮತ್ತೆ ಕೆಲವರೂ ಅಭಿಪ್ರಾಯಪಡುವರು.

	12 ಲೂ ಅಥವಾ ಸ್ವರಸ್ಥಾನಗಳಿಗೆ ಹ್ವಾಂಗ್ ಚಿಂಗ್ ಸ್ವರವೇ ಆಧಾರವೆಂದು ತಿಳಿದುಬರುತ್ತದೆ. ಈ ಸ್ವರಗಳನ್ನು ಒಂದು ಸ್ಥಾಯಿಯಲ್ಲಿ ಅನುಕ್ರಮವಾಗಿ ಕೆಳಕಂಡಂತೆ ಅಳವಡಿಸಲಾಗಿದೆ. ಈ ಕ್ರಮದಲ್ಲಿ ಸಂಖ್ಯೆಗಳ ಮತ್ತು ಹೆಸರುಗಳ ಸಂಬಂಧ ಹೀಗಿವೆ.

	8	10	12	2	4	6

1	3	5	7	7	11

	ಈ 12ಸ್ವರಗಳನ್ನು ಮಂದ್ರ (ಗ್ರೇವ್), ಮಧ್ಯಮ (ಮಿಡ್ಲ್) ಮತ್ತು ಊದ್ರ್ವ (ಅಕ್ಯೂಟ್) ಎಂಬ ಮೂರು ಸ್ಥಾಯಿ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಈ ಶ್ರೇಣಿಯನ್ನು ಚೀನದ ಕ್ರೊಮ್ಯಾಟಿಕ್ ಸ್ವರಶ್ರೇಣಿ ಎಂದು ಕರೆದರು. ಇದಕ್ಕಿಂತಲೂ ಪ್ರಖ್ಯಾತವಾದ ಪುರಾತನ ಔಡವ ಶ್ರೇಣಿ "ಮ ಪ ದ ಸ ರಿ" ಎಂಬ ಸ್ವರಗಳನ್ನು ಹೊಂದಿದೆ. ಬಹುಶಃ ಚೌ ಆಳ್ವಿಕೆಯಲ್ಲಿ ಸಪ್ತಸ್ವರಗಳನ್ನೊಳಗೊಂಡ ಶ್ರೇಣಿಯನ್ನು ಮತಾನುಸಂಬಂಧವಾದ ಸಂಗೀತದಲ್ಲಿ ಬಳಸಲಾಯಿತು. ಆ ಶ್ರೇಣಿ "ಮ ಪ ದ ನಿ ಸ" ಎಂಬ 7 ಸ್ವರಗಳನ್ನು ಹೊಂದಿದ್ದು ಔಡವ ಶ್ರೇಣಿಗೆ 4ನೆಯ ನಿ ಮತ್ತು 7ನೆಯ ಗ ಎಂಬ ಎರಡು ಹೊಸ ಸ್ವರಗಳು ಸೇರಲ್ಪಟ್ಟವು.

	ಚೀನ ಮಂಗೋಲಿಯನ್ನರ ಒಳಬಂದ ಅನಂತರ ಯೂಆನ್ ಆಳ್ವಿಕೆಯ ಕಾಲದಲ್ಲಿ ಮಧ್ಯ ಏಷ್ಯದಲ್ಲಿ ಬಳಕೆಯಲ್ಲಿದ್ದ ಒಂದು ಶ್ರೇಣಿ ಯೂಆನ್ ಎಮಬ ಹೆಸರಿನಿಂದ ಬಳಕೆಗೆ ಬಂತು. ಕಾಲಕ್ರಮೇಣ 9 ಸ್ವರಗಳನ್ನುಳ್ಳ ಶ್ರೇಣಿಯಲ್ಲಿ ಎರಡು ಸ್ವರಗಳನ್ನು ಸಹಾಯಕ ಸ್ವರಗಳೆಂದು ತೆಗೆದುಕೊಂಡು ರೂಪಿಸಿದ ಒಂದು ಹೊಸ ಶ್ರೇಣಿ ಬಳಕೆಗೆ ಬಂದಿತು.

	ಚೀನೀ ಸಂಗೀತವಾದ್ಯಗಳಲ್ಲಿ ಧರ್ಮವನ್ನು ಬಿಗಿದ ಹಲವಾರು ವಾದ್ಯಗಳನ್ನು ಕಾಣಬಹುದು. ಅವುಗಳಲ್ಲಿ ಅವರ್ ಗ್ಲಾಸ್ ಡ್ರಮ. ಕೆಟಲ್ ಡ್ರಂ. ಬ್ಯಾರೆಲ್ ಡ್ರಂ ಮುಂತಾದವು ಗಮನಾರ್ಹ. ಇವಲ್ಲದೆ ಹಲವಾರು ಸುಷಿರ ವಾದ್ಯಗಳೂ ತಂತಿ ವಾದ್ಯಗಳೂ ಇವೆ. ಚೀನದ ಸಂಗೀತವನ್ನು ನಾಲ್ಕಾರು ಬಗೆಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಕ್ರಿಯವಿಧಿಗಳಲ್ಲಿ ಬಳಸುವ ಸಂಗೀತ (ರಿಚುಯಲ್ ಮ್ಯೂಸಿಕ್), ಗೃಹಸಂಗೀತ (ಚೇಂಬರ್ ಮ್ಯೂಸಿಕ್), ಗೀತನಾಟಕಗಳು(ಮ್ಯೂಸಿಕಲ್ ಡ್ರಾಮ), ಪಕ್ಕವಾದ್ಯಗಳ ಸಮೇತ ಹಾಡುವ ಸಂಗೀತ (ಮಿನ್‍ಸ್ಟ್ರೆಲ್‍ಸೀ) ಇವು ಮುಖ್ಯವಾದುವು. ಚೀನೀ ಜಾನಪದ ಸಂಗೀತ ಹೆಚ್ಚು ಜನಪ್ರಿಯವಾಗಿದೆ. ಈ ಪ್ರಭೇದಗಳಲ್ಲಿ ಒಂದು ಮತ್ತು ಎರಡನೆಯ ವರ್ಗದ ಸಂಗೀತವನ್ನು ಶಾಸ್ತ್ರೀಯ ಸಂಗೀತವೆಂತಲೂ ಉಳಿದವನ್ನು ಜನಪ್ರಿಯ ಸಂಗೀತವೆಂತಲೂ ಕರೆಯಲಾಗಿದೆ.								(ಎಂ.ವಿ.ಆರ್.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ